ಹೊಸದಿಲ್ಲಿ, ಆ. 20 : ದೇಶದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ನ ಸಂಪೂರ್ಣ ಆವೃತ್ತಿಯನ್ನು ಹಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರದ ಹೊರತಾಗಿಯೂ, ಕೇವಲ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತವಾಗಿರಲು ನಿರ್ಧರಿಸಿರುವ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಟೀಕೆಗೆ ಗುರಿಯಾಗಿದೆ. ಸೋನಿಯಾ ಗಾಂಧಿ ವಂದೇ ಮಾತರಂ ಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ, ಇದೀಗ ಆ ವಿರೋಧ ಪಕ್ಷವನ್ನು “ಹೊಸ ಮುಸ್ಲಿಂ ಲೀಗ್” ಎಂದು ಜರೆದಿದೆ. “ಈ ನಿರ್ಧಾರವು ದೇಶದ ಬಗೆಗಿನ ಕಾಂಗ್ರೆಸ್‌ನ “ದೇಶಭಕ್ತಿ ಮತ್ತು ನಿಷ್ಠೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯಕ್ರಮಗಳಲ್ಲಿ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂಬ 1937ರ ನಿರ್ಣಯವನ್ನೇ ಮುಂದುವರಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಇಂದು (ಆ.20-ಗುರುವಾರ) ನಿರ್ಧರಿಸಿದೆ.
“ಸ್ವಾತಂತ್ರ್ಯ ಹೋರಾಟದ ಏಕೈಕ ಹಕ್ಕುದಾರರು ನಾವೇ ಎಂಬ ಕಾಂಗ್ರೆಸ್‌ನ ಹಕ್ಕನ್ನು, ಸಂವಿಧಾನ, ಸಂಸತ್ತು ಮತ್ತು ದೇಶಕ್ಕಿಂತ ಪಕ್ಷವೇ ದೊಡ್ಡದು ಎಂದು ಕಾಂಗ್ರೆಸ್ ಭಾವಿಸಿದೆ ಎಂಬುದನ್ನು ಈ ನಡೆ ಸಾಬೀತುಪಡಿಸಿದೆ. ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವುದನ್ನು ವಿರೋಧಿಸಿದ್ದ 1931ರ ಮುಸ್ಲಿಂ ಲೀಗ್‌ನ ಹಠಮಾರಿ ಧೋರಣೆಯನ್ನೇ, ಕಾಂಗ್ರೆಸ್‌ನ ಈ ನಿರ್ಧಾರವು ಪ್ರತಿಬಿಂಬಿಸುತ್ತದೆ” ಎಂದು ಸುಧಾಂಶು ತ್ರಿವೇದಿ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ವಾದವೇನು ?
ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಇವು ಕಾಂಗ್ರೆಸ್‌ಗೆ “ಭಾವನಾತ್ಮಕ ವಿಷಯಗಳು” ಎಂದು ಹೇಳಿದ್ದಾರೆ. ಕಳೆದ ಮಂಗಳವಾರ (ಆ. 18) ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮತನಾಡುತ್ತಾ, “ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯಿಂದ ದೇಶಭಕ್ತಿಯ ಪಾಠ ಕಲಿಯುವ ಅವಶ್ಯಕತೆ ಇಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದರು.
“ವಂದೇ ಮಾತರಂ ಕುರಿತಾದ ತಮ್ಮ ಪಕ್ಷದ ನಿಲುವು 1937ರಲ್ಲಿ ಪಕ್ಷದ ಉನ್ನತ ನಾಯಕತ್ವ ಕೈಗೊಂಡಿದ್ದ ನಿರ್ಧಾರಕ್ಕೆ ಅನುಗುಣವಾಗಿದೆ. ಆ ಸಮಯದಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರ ಸಮ್ಮುಖದಲ್ಲೇ, ಗೀತೆಯ ಮೊದಲೆರೆಡು ಚರಣಗಳನ್ನು ಮಾತ್ರ ಹಾಡಲು ತೀರ್ಮಾನಿಸಲಾಗಿತ್ತು” ಎಂದು ವೇಣುಗೋಪಾಲ್ ಪ್ರತಿಪಾದಿಸಿದ್ದಾರೆ.
ಸಂಸತ್ತಿನ ತೀರ್ಮಾನವೇನು?
ಸಾರ್ವಜನಿಕ ಸಮಾರಂಭಗಳು ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಪೂರ್ತಿಯಾಗಿ ಹಾಡುವುದನ್ನು ಸರ್ಕಾರವು ಫೆಬ್ರವರಿಯಲ್ಲಿ ಕಡ್ಡಾಯಗೊಳಿಸಿದೆ. ಅಲ್ಲದೇ ರಾಷ್ಟ್ರೀಯ ಗೀತೆಯನ್ನು ಹಾಡುವುದಕ್ಕೆ ಅಡ್ಡಿಪಡಿಸುವುದು ಅಥವಾ ತಡೆಯುವುದನ್ನು ಅಪರಾಧವೆಂದು ಪರಿಗಣಿಸುವ ಮಸೂದೆಯೊಂದನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಸಂಸತ್ತಿನ ತೀರ್ಮಾನದ ಬಳಿಕವೂ ಕಾಂಗ್ರೆಸ್ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದಾಗಿ ಹಠ ಮಾಡುತ್ತಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸ್ವಾತಂತ್ರ್ಯ ದಿನಾಚರಣೆ ವೇಳೆ ಕಾಂಗ್ರೆಸ್ ಪ್ರಧಾನ ಕಚೇರಿ ಇಂದಿರಾ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಿದ ಕಾರಣಕ್ಕೆ, ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಂಕಿಮ್ ಚಂದ್ರ ಚಟರ್ಜಿ ವಂಶಸ್ಥರಿಂದ ಒತ್ತಾಯ ಕೇಳಿಬಂದಿತ್ತು.



