ಬೆಳ್ತಂಗಡಿ, ಆ. 20 : ರಾಜ್ಯದಲ್ಲಿ ಸಚಿವ ಯುಟಿ ಖಾದರ್ ಅವರು ಸ್ಟಾರ್ ಹೋಟೆಲ್ ಗಳ ಮೇಲೆ ದಾಳಿಗಳನ್ನು ನಡೆಸಿ, ಕಳಪೆ ಗುಣಮಟ್ಟದ ಆಹಾರಗಳ ವಿರುದ್ಧ ಸಮರ ಸಾರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ, ಇದಕ್ಕೆ ಸಮಾಜದಲ್ಲಿ ಉತ್ತಮ ಬೆಂಬಲವೂ ವ್ಯಕ್ತವಾಗುತ್ತಿದೆ. ಆದರೆ, ಸರ್ಕಾರವೇ ತಾನು ವಿತರಿಸುವ ಆಹಾರದಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ವಿತರಿಸಿದರೆ ಹೇಗೆ ? ಹೌದು, ಸರ್ಕಾರ ಬಡವರ ಹಸಿವು ನೀಗಿಸಲು ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು. ಹಲವು ವಿವಾದಗಳ ಮೂಲಕ ಸಾಗಿಬಂದ ಈ ಯೋಜನೆಗೆ ಸದ್ಯ, ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ. ಅನ್ನಭಾಗ್ಯದ ಹೆಸರಿನಲ್ಲಿ ಪೂರೈಕೆಯಾಗುವ ಅಕ್ಕಿಯ ಗುಣಮಟ್ಟವನ್ನು ನೋಡದೇ ವಿತರಿಸುವ ಕೆಲಸವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿಯೆಂಬಂತೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಸೊಸೈಟಿಗೆ ಸುಮಾರು ಎರಡು ವರ್ಷಗಳ ಹಿಂದಿನ, ಕಳಪೆ ಗುಣಮಟ್ಟದ ಅಕ್ಕಿಯನ್ನು ಬಡವರಿಗೆ ಹಂಚುವುದಕ್ಕೆ ಸರ್ಕಾರ ಪೂರೈಕೆ ಮಾಡಿದೆ.
ತಾಲೂಕಿನ ನಿಡ್ಲೆ, ಪಟ್ರಮೆ ಲೈನಿಗೆ ಆಗಸ್ಟ್ 19ರಂದು ಬೆಳಗ್ಗೆ ಲಾರಿ ಪೂರ್ತಿ ಪಡಿತರ ಅಕ್ಕಿ ಬಂದಿದ್ದು ನಿಡ್ಲೆ ಪಡಿತರ ಕೇಂದ್ರದಲ್ಲಿ ಅಂದಾಜು 50 ರಿಂದ 100 ಗೋಣಿ ಅಕ್ಕಿಯನ್ನು ಅನ್‌ಲೋಡ್ ಮಾಡಿ ತೆರಳಿದ್ದಾರೆ. ನಿಡ್ಲೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ನಾಗರಿಕರು ಅಕ್ಕಿ ಬಂದ ಖುಷಿಯಲ್ಲಿ, ತಮ್ಮ ಕೆಲಸಕ್ಕೂ ಹಾಜರಾಗದೆ ಅಕ್ಕಿಪಡೆಯಲೆಂದು ಆಗಮಿಸಿದ್ದಾರೆ. ಆದರೆ, ಸ್ಥಳಕ್ಕೆ ಬಂದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಎರಡು ವರ್ಷಗಳ ಹಿಂದೆ ಅಂದರೆ 2024-25 ರಲ್ಲಿ ಪ್ಯಾಕ್ ಮಾಡಲಾದ ಗೋಣಿಯನ್ನು ತೆರೆದು ನೋಡಿದಾಗ ಅಕ್ಕಿ ಸಂಪೂರ್ಣವಾಗಿ ಹಾಳಾಗಿ ಅದರಲ್ಲಿ ಹುಳ ಆಗಿರುವುದು ಕಂಡು ಬಂದಿತ್ತು.

ಸ್ಥಳೀಯರ ಆಕ್ರೋಶ :
ಎರಡು ವರ್ಷಗಳ ಹಿಂದಿನ ಅಕ್ಕಿಯನ್ನು ಹಂಚಲು ಬಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, “ಈ ಅಕ್ಕಿ ಪ್ರಾಣಿಗಳು ತಿನ್ನುವುದಕ್ಕೂ ಯೋಗ್ಯವಾಗಿಲ್ಲ” ಎಂದಿದ್ದಾರೆ. ಅನ್ನಭಾಗ್ಯದ ಅಕ್ಕಿ ಕೆಟ್ಟು ಹೋಗಿದೆ ಇದನ್ನು ನಾವು ಬಡವರು ಹೇಗೆ ಆಹಾರವಾಗಿ ತೆಗೆದುಕೊಳ್ಳುವುದು, ಸಂಬಂಧಪಟ್ಟವರು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬದಲಿ ವ್ಯವಸ್ಥೆಯ ಭರವಸೆ :
ಕಳಪೆ ಗುಣಮಟ್ಟದ ಅಕ್ಕಿಯನ್ನು ಗಮನಿಸಿ, ಪಡಿತರಿಗೆ ಆ ಅಕ್ಕಿಯನ್ನು ವಿತರಣೆ ಮಾಡಿಲ್ಲ. ಈಗಾಗಲೇ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಬದಲಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆಂದು ನಿಡ್ಲೆ ನ್ಯಾಯಬೆಲೆ ಅಂಗಡಿಯವರು ತಿಳಿಸಿದ್ದಾರೆನ್ನಲಾಗಿದೆ.



