ಚೆನ್ನೈ, ಮೇ 13 : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ನಿರೀಕ್ಷೆಗೂ ಮೀರಿ 144 ಶಾಸಕರ ಬೆಂಬಲದೊಂದಿಗೆ ಬುಧವಾರ ವಿಶ್ವಾಸ ಮತವನ್ನು ಸುಲಭವಾಗಿ ಗೆದ್ದಿದ್ದಾರೆ. ಟಿವಿಕೆ ನಾಯಕ ವಿಜಯ್ ಅವರ ವಿಶ್ವಾಸ ಮತ ಯಾಚನೆ ಎಐಎಡಿಎಂಕೆ ವಿಭಜನೆಗೆ ವಿಧಾನಸಭೆ ಸಾಕ್ಷಿಯಾಗಿದ್ದು, ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ 22 ಶಾಸಕರು ಸರಕಾರದ ವಿರುದ್ಧ ಮತ ಚಲಾಯಿಸಿದರೆ, ಸಿವಿ ಷಣ್ಮುಗಂ ಬಣದ 25 ಶಾಸಕರು ವಿಜಯ್ ಪರವಾಗಿ ಮತ ಚಲಾಯಿಸಿದರು. ಎನ್ ಡಿಎ ಮೈತ್ರಿಕೂಟದಲ್ಲಿರುವ ನಾಲ್ವರು ಪಿಎಂಕೆ ಶಾಸಕರು ಮತ್ತು ಒಬ್ಬ ಬಿಜೆಪಿ ಶಾಸಕ ಮತದಾನದಿಂದ ದೂರ ಉಳಿದರು.
ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರು ವಿಶ್ವಾಸ ಮತಯಾಚನೆಗೂ ಮುನ್ನ ಸದನದಲ್ಲಿ ಹಾಜರಿದ್ದ ಶಾಸಕರ ಎಣಿಕೆ ಮಾಡಿದರು. ಡಿಎಂಕೆ ಸಭಾತ್ಯಾಗ ಮಾಡುವುದರೊಂದಿಗೆ, ಟಿವಿಕೆ, ಎಡಪಕ್ಷಗಳು, ವಿಸಿಕೆ, ಐಯುಎಂಎಲ್, ಬಿಜೆಪಿ, ಡಿಎಂಡಿಕೆ, ಪಿಎಂಕೆ ಮತ್ತು ಇತರ ಪಕ್ಷಗಳ ಉಳಿದ ಶಾಸಕರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಪಕ್ಷಕ್ಕೆ ಮತ್ತು ತನಗೆ ಮತ ಹಾಕಿದ ಶಾಸಕರಿಗೆ ಧನ್ಯವಾದ ಅರ್ಪಿಸಿದರು.ನಮ್ಮ ಸರ್ಕಾರ ದುರಹಂಕಾರಿಯಲ್ಲ ಎಂದರು. ವಿಶ್ವಾಸ ಮತಯಾಚನೆಯೊಂದಿಗೆ, ವಿಧಾನಸಭೆ ಅಧಿವೇಶನ ಮುಕ್ತಾಯವಾಯಿತು.
ಉದಯನಿಧಿ ಸ್ಟಾಲಿನ್ ಕಿಡಿ
“ಇಂದು ಬಹುಮತ ಪರೀಕ್ಷೆ ನಡೆಯುತ್ತಿದ್ದು, ರಾಜ್ಯದ ಎಲ್ಲಾ ಜನರು ಟಿವಿಕೆಗೆ ಮತ ಹಾಕಿಲ್ಲ. ಒಟ್ಟು 4.93 ಕೋಟಿ ಮತಗಳಲ್ಲಿ ಕೇವಲ 1.72 ಕೋಟಿ ಜನರು ಟಿವಿಕೆಗೆ ಮತ ಹಾಕಿದ್ದಾರೆ. ಉಳಿದ 65% ಜನರು ಟಿವಿಕೆ ವಿರುದ್ಧ ಮತ ಹಾಕಿದ್ದಾರೆ. ಟಿವಿಕೆಗೆ ಮತ ಹಾಕಿದ ಜನರು ಸಹ ಈಗ ಅದನ್ನು ಅರಿತುಕೊಳ್ಳುತ್ತಿದ್ದಾರೆ. 118 ಸಂಖ್ಯಾಬಲ ಹೊಂದಿರುವ ಪಕ್ಷ ಮಾತ್ರ ಸರ್ಕಾರ ರಚಿಸಬಹುದು. ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಈಗ ಜನರನ್ನು ಭೇಟಿ ಮಾಡಿ ಧನ್ಯವಾದ ಹೇಳಲು ಸಹ ಹೋಗದೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ” ಎಂದು ಕಿಡಿ ಕಾರಿದರು.
“ಎಐಎಡಿಎಂಕೆ ಎರಡು ಹೋಳಾಗಿದೆ. ಈ ರಾಜಕೀಯ ಬದಲಾವಣೆಯ ಹಿಂದೆ ಏನಾದರೂ ವಿನಿಮಯ ನಡೆದಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪ್ರಚಾರದ ಸಮಯದಲ್ಲಿ, ನೀವು ನಿಮ್ಮ ಪ್ರಣಾಳಿಕೆಯಲ್ಲಿ ಎಐಎಡಿಎಂಕೆ ಹೆಸರಿಸಲು ನಿರಾಕರಿಸಿದ್ದೀರಿ ಮತ್ತು ಅದನ್ನು ಇತರ ಪಕ್ಷಗಳು ಎಂದು ಮಾತ್ರ ಉಲ್ಲೇಖಿಸಿದ್ದೀರಿ. ಆದರೆ ಈಗ ನೀವು ಅದೇ ನಾಯಕರನ್ನು ಭೇಟಿಯಾಗುತ್ತಿದ್ದೀರಿ, ಮತ್ತು ಅವರಿಗೆ ಸಚಿವ ಸ್ಥಾನಗಳನ್ನು ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಾವು ವಿಧಾನಸಭೆಯಿಂದ ಹೊರನಡೆಯುತ್ತಿದ್ದೇವೆ. ನಾವು ಹೊರನಡೆದ ನಂತರ, ನಿಮಗೆ ಬಹುಮತ ಸಿಗುತ್ತದೆ. ನಮ್ಮ ಸರ್ಕಾರ ಪರಿಚಯಿಸಿದ ಕಲ್ಯಾಣ ಯೋಜನೆಗಳನ್ನು ರಾಜಕೀಯಗೊಳಿಸಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಉದಯನಿಧಿ ಪಕ್ಷದ ಶಾಸಕರೊಂದಿಗೆ ಸಭಾತ್ಯಾಗ ಮಾಡಿದರು.

