ಬೆಂಗಳೂರು : ರಣರಂಗವಾದ ಕೆಪಿಸಿಸಿ ಕಚೇರಿ – ಕೈ ಕೈ ಮಿಲಾಯಿಸಿಕೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು

ಬೆಂಗಳೂರು, ಮೇ 19 : ನೀಟ್ ಪರೀಕ್ಷೆ ವಿರುದ್ಧ ಹೋರಾಟ ರೂಪಿಸಲು ಸೋಮವಾರ ಯುವ ಕಾಂಗ್ರೆಸ್ ಕರೆದಿದ್ದ ಪೂರ್ವಭಾವಿ ಸಭೆಯು ಸ್ವತಃ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡರ ವಿರುದ್ಧದ ಹೋರಾಟಕ್ಕೆ ವೇದಿಕೆಯಾದ ಪ್ರಸಂಗ ನಡೆಯಿತು. ಇದಕ್ಕೆ ಸ್ವತಃ ಆಡಳಿತ ಪಕ್ಷದ ಕೇಂದ್ರಬಿಂದು ಕೆಪಿಸಿಸಿ ಕಚೇರಿ ಸಾಕ್ಷಿಯಾಯಿತು.

Advertisement

ಯುವ ಕಾಂಗ್ರೆಸ್ ಚುನಾವಣೆ ಬಳಿಕ ಸದ್ದಿಲ್ಲದೆ ‘ಅಮಾನತು ಪರ್ವ’ ಶುರುವಾಗಿದ್ದರಿಂದ 2 ಬಣ (ಮಂಜುನಾಥ್ ಗೌಡ ಮತ್ತು ದೀಪಿಕಾ ರೆಡ್ಡಿ)ಗಳೇ ಸೃಷ್ಟಿಯಾಗಿವೆ. ಆ ಪೈಕಿ ‘ಅಮಾನತು ಶಿಕ್ಷೆ’ಗೆ ಗುರಿಯಾದವರಲ್ಲಿ ಅಸಮಾಧಾನದ ಹೊಗೆ ಬೂದಿಮುಚ್ಚಿದ ಕೆಂಡದಂತಿತ್ತು. ಅದು ಸಭೆಯಲ್ಲಿ ಸ್ಫೋಟಗೊಂಡಿತು. ಇದರಿಂದ ಎರಡೂ ಬಣಗಳ ನಡುವೆ ವಾಗ್ವಾದ ತಾರಕಕ್ಕೇರಿ, ಕೈ-ಕೈ ಮಿಲಾಯಿಸುವ ಹಂತ ತಲುಪಿತು. ಇದರಿಂದ ಕೆಪಿಸಿಸಿ ಕಚೇರಿ ರಣರಂಗವಾಗಿ ಪರಿಣಮಿಸಿತು.

ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಿಗಂ ಭಂಡಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮಾನತುಗೊಂಡ ಹಾಗೂ ಜಿಲ್ಲಾ ಅಧ್ಯಕ್ಷ ಹುದ್ದೆಯಿಂದ ಬಿಡುಗಡೆಗೊಂಡ ಕೆಲ ಮುಖಂಡರು ತಮ್ಮ ವಿರುದ್ಧ ಕೈಗೊಂಡ ಶಿಕ್ಷೆಯನ್ನು ಪ್ರಶ್ನಿಸಿದರು. ಯಾವ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. ಆಗ ಮಂಜುನಾಥ್ ಗೌಡ ಬಣದಲ್ಲಿ ಗುರುತಿಸಿಕೊಂಡ ಮುಖಂಡರು ಮಧ್ಯಪ್ರವೇಶಿಸಿ ‘ಅದನ್ನು ಕೇಳಲು ನೀವ್ಯಾರು?’ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಎದುರಾಳಿ ಬಣ, ‘ನಾವು ಕೇಳುತ್ತಿರುವುದು ನಿಮ್ಮನ್ನಲ್ಲ, ಉಸ್ತುವಾರಿಯನ್ನು’ ಎಂದು ಹೇಳಿದ್ದಾರೆ.

ಆಗ ಎರಡೂ ಬಣಗಳ ನಡುವೆ ಗಲಾಟೆಯ ಕಿಡಿ ಹೊತ್ತಿತು. ಸರ್ವಾಧಿಕಾರಿಗೆ ಧಿಕ್ಕಾರ ಎಂದು ಮಂಜುನಾಥ್ ಗೌಡ ವಿರುದ್ಧ ಕೆಲವರು ಘೋಷಣೆ ಕೂಗಿದರು. ಎದುರಾಳಿ ಬಣದಿಂದ ಅಷ್ಟೇ ಜೋರಾಗಿ ವಾಗ್ದಾಳಿ ಮತ್ತು ಧಿಕ್ಕಾರಗಳು ಮೊಳಗಿದವು. ಯುವ ಕಾರ್ಯಕರ್ತರು ಕುರ್ಚಿಗಳನ್ನು ತಳ್ಳಾಡಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಕೆಲ ಕಾರ್ಯಕರ್ತರು ಮಧ್ಯಪ್ರವೇಶಿಸಿದ ನಂತರ ತಿಳಿಯಾಯಿತು.

ಯುವ ಕಾಂಗ್ರೆಸ್ ವತಿಯಿಂದ ಮೇ 21ರಂದು ನೀಟ್ ಅಕ್ರಮದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಜತೆಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹುದ್ದೆ ತಡೆಹಿಡಿದಿರುವ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆ ಬಳಿಕ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಅವರನ್ನು ತಡೆದು ತಮ್ಮ ಹುದ್ದೆಯನ್ನು ತಡೆ ಹಿಡಿದಿರುವ ಬಗ್ಗೆ ದೀಪಿಕಾ ರೆಡ್ಡಿ ಪ್ರಶ್ನಿಸಿದರು. ಈ ವೇಳೆ ಮಂಜುನಾಥಗೌಡ ಅದಕ್ಕೆ ಪ್ರತ್ಯೇಕ ಸಭೆ ಕರೆದು ಚರ್ಚಿಸುವುದಾಗಿ ಹೇಳಿದರು. ಆದರೂ ದೀಪಿಕಾ ರೆಡ್ಡಿ ಅವರು ಉತ್ತರಕ್ಕೆ ಪಟ್ಟುಹಿಡಿದ ಹಿನ್ನೆಲೆಯಲ್ಲಿ ಮಂಜುನಾಥಗೌಡ ಹಾಗೂ ದೀಪಿಕಾ ರೆಡ್ಡಿ ಅವರ ಬೆಂಬಲಿಗರ ನಡುವೆ ತೀವ್ರ ತಳ್ಳಾಟ, ನೂಕಾಟ ನಡೆಯಿತು. ಇದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಿರುಗಿತು.

ಪೂರ್ಣ ವಿಡಿಯೋ ಲಭ್ಯ, ಕ್ರಮ ಖಚಿತ: ಮಂಜುನಾಥ್ ಗೌಡ

ಗಲಾಟೆ ಕುರಿತು ಪ್ರತಿಕ್ರಿಯಿಸಿದ ಎಚ್.ಎಸ್. ಮಂಜುನಾಥ್ ಗೌಡ, ‘ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಗಲಾಟೆ ಮಾಡಿದವರ ಸಂಪೂರ್ಣ ವಿಡಿಯೋ ಲಭ್ಯವಿದೆ. ಆ ಕುರಿತ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಪಕ್ಷದ ಚೌಕಟ್ಟು ಮೀರಿದವರ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ಶಿಸ್ತು ಕ್ರಮವಲ್ಲ, ವೈಯಕ್ತಿಕ ಸೇಡು: ದೀಪಿಕಾ ರೆಡ್ಡಿ

ಇದಕ್ಕೂ ಮೊದಲು ಮಾತನಾಡಿದ ದೀಪಿಕಾ ರೆಡ್ಡಿ, ‘ನನ್ನ ಮೇಲಿನದ್ದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು. ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯದ ವಿರುದ್ಧ ಮೌನವಾಗಿರುವುದಿಲ್ಲ. ಇದರ ಬಗ್ಗೆ ನ್ಯಾಯ ಕೇಳಿದರೆ ಜಗಳ ಮಾಡಿದ್ದಾರೆ’ ಎಂದು ದೂರಿದರು. ‘ನಾನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮೂರು ಲಕ್ಷ ಮತಗಳನ್ನು ಪಡೆದಿದ್ದೇನೆ. ದೇಶದಲ್ಲೇ ಅತಿಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನು ಒಬ್ಬಳು. ನನ್ನ ಹುದ್ದೆಯನ್ನು ವಿನಾಕಾರಣ ತಡೆ ಹಿಡಿದಿದ್ದಾರೆ. ಜನಾದೇಶದ ಎದುರು ಯಾವ ಆದೇಶವೂ ಕೆಲಸ ಮಾಡಲ್ಲ’ ಎಂದು ಹೇಳಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.